ಹಕ್ಸ್‍ಲಿ, ಜೂಲಿಯಸ್ ಸೊರೇಲ್
	1887-1975. ಪ್ರಸಿದ್ಧ ಬ್ರಿಟಿಷ್ ಜೀವವಿಜ್ಞಾನಿ ಹಾಗೂ ಬರೆಹಗಾರ. ಈತ 1887ರಲ್ಲಿ ಲಂಡನ್ನಿನಲ್ಲಿ ಜನಿಸಿದ. ಇವನ ತಂದೆ ಲಿಯೊನಾರ್ಡ್ ಹಕ್ಸ್‍ಲಿ, ಒಳ್ಳೆಯ ಕವಿ, ಗ್ರಂಥಸಂಪಾದಕ ಹಾಗೂ ವಿದ್ವಾಂಸನಾಗಿದ್ದು, ಈಟನ್‍ನಲ್ಲಿ ರಾಜಾಶ್ರಯ ಪಡೆದ ವಿದ್ವಾಂಸನಾಗಿದ್ದ. ಈತ 1909ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ಪ್ರಾಣಿಶಾಸ್ತ್ರವನ್ನು ಓದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದ (1909). ಆಕ್ಸ್‍ಫರ್ಡ್, ಹೂಸ್ಟನ್, ಟೆಕ್ಸಾಸ್, ಲಂಡನ್ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ. ರಾಯಲ್‍ಸೊಸೈಟಿಯ ಫೆಲೋ ಆಗಿ ಚುನಾಯಿತನಾದ (1938). 

	ಈತ ನಲ್ವತ್ತಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾನೆ. ಈತನಿಗೂ ತಂದೆಯಂತೆ ಕಾವ್ಯದ ಬಗೆಗೆ ಆಸಕ್ತಿಯಿತ್ತು. ಕವಿಯಾಗಿಯೂ ಈತ ಹೆಸರುಗಳಿಸಿದ್ದಾನೆ. ದಿ ಕ್ಯಾಪ್ಟೀವ್ ಶ್ರೂ ಎನ್ನುವುದು ಇವನ ಕವನ ಸಂಗ್ರಹ(1932). ಅಸಂಖ್ಯಾತ ವೈಜ್ಞಾನಿಕ ಲೇಖನಗಳನ್ನು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾನೆ. ದಿ ಇಂಡಿವಿಜುವಲ್ ಇನ್ ಅನಿಮಲ್ ಕಿಂಗ್‍ಡಮ್ ಎಂಬುದು ಇವನ ಪ್ರಸಿದ್ಧ ಕೃತಿ(1912). ಆಧುನಿಕ ಜೀವವಿಜ್ಞಾನದ ಮೇಲೆ ಅಗಾಧ ಪ್ರಭಾವ ಬೀರಿರುವ ಅನೇಕ ಮೂಲಭೂತ ಕೃತಿಗಳನ್ನು ಈತ ಬರೆದಿದ್ದಾನೆ. ಪ್ರಾಬ್ಲಮ್ಸ್ ಆಫ್ ರಿಲೇಟಿವ್‍ಗ್ರೋತ್(1932) ಎಲಿಮೆಂಟ್ಸ್ ಆಫ್ ಎಕ್ಸ್‍ಪೆರಿಮೆಂಟಲ್ ಎಂಬ್ರಿಯೊಲಜಿ (ಜಿ.ಆರ್.ಡೆಬೀರ್ ಅವನೊಂದಿಗೆ, 1934); ಎವಲೂಷನ್, ದಿ ಮಾಡ್ರನ್ ಸಿಂಥೆಸಿಸ್(1942). ಹಕ್ಕಿಗಳ ಮಿಲನದ ಬಗ್ಗೆ ಈತ ಸ್ವಾರಸ್ಯಕರವಾದ ಲೇಖನಗಳನ್ನು ಬರೆದಿದ್ದಾನೆ. ಪ್ರಾಣಿಗಳ ನಡೆವಳಿಕೆ ಲಿಂಗದ ಆಯ್ಕೆ ಮುಂತಾದ ಕ್ಷೇತ್ರಗಳಲ್ಲಿ ಇವನು ನೀಡಿದ ಕೊಡುಗೆ ಗಮನಾರ್ಹವಾದುದು. ಇವನ ಬರೆಹ ಹಾಗೂ ಸಂಶೋಧನೆಗಳಿಂದ ಇವನ ಕಾಲದ ಶೈಕ್ಷಣಿಕ ವಾತಾವರಣ ಪ್ರಭಾವಗೊಂಡಿತ್ತು. ಇವನ ಅಧ್ಯಯನಗಳಿಂದ ಸಮಾಜವಿಜ್ಞಾನ ಹಾಗೂ ಮಾನವಶಾಸ್ತ್ರ ಅಧ್ಯಯನಗಳು ಪ್ರಭಾವಿತಗೊಂಡವು. ಸ್ವಾಭಾವಿಕ ಆಯ್ಕೆ ಎಂಬುದನ್ನು ಈತ ಒಪ್ಪುವುದಿಲ್ಲ. ಭಾವನಾತ್ಮಕವಾಗಿ, ಪ್ರಜ್ಞಾಪೂರ್ವಕವಾಗಿ ಆಯ್ದುಕೊಳ್ಳುವುದರ ಮೂಲಕ ವಿಕಾಸಕ್ರಿಯೆ ನಡೆಯುತ್ತದೆ ಎಂಬುದು ಇವನ ನಂಬುಗೆ. ಇವನ ಪ್ರಕಾರ, ವಿಕಾಸ, ಮುಖ್ಯವಾಗಿ ಸಾಂಸ್ಕøತಿಕವಾದುದು; ಆನುವಂಶೀಯವಲ್ಲ. ಜನಾಂಗವನ್ನು ಕುರಿತ ವಿಮರ್ಶೆ, ಈ ಕಲ್ಪನೆಯನ್ನು ಕುರಿತ ಪುನರ್ ಮೌಲ್ಯಮಾಪನಗಳು ಇವನ ಕೊಡುಗೆಗಳಾಗಿವೆ. ಜನಸಂಖ್ಯಾ ನಿಯಂತ್ರಣ, ಕುಟುಂಬ ಯೋಜನೆ ಮೊದಲಾದ ವಿಚಾರಗಳನ್ನು ಈತ ಪ್ರಬಲವಾಗಿ ಪ್ರತಿಪಾದಿಸಿದ. ಆಫ್ರಿಕದರ್ಶನ, ಸೋವಿಯತ್‍ನಲ್ಲಿ ಒಬ್ಬ ವಿಜ್ಞಾನಿ ಪ್ರಸಿದ್ಧ ಪ್ರವಾಸ ಕೃತಿಗಳು. ರಾಜಕೀಯ ಮತ್ತು ಆರ್ಥಿಕ ಯೋಜನೆಗಳಲ್ಲೂ ಅನ್ಯಾದೃಶ ಹೆಸರನ್ನು ಪಡೆದಿದ್ದಾನೆ. ಪ್ರಾಯೋಗಿಕ ಜೀವವಿಜ್ಞಾನ ಸಮಾಜದ ಸಂಸ್ಥಾಪಕರಲ್ಲಿ ಈತನೂ ಒಬ್ಬನಾಗಿದ್ದಾನೆ. ವಿಶ್ವಸಂಸ್ಥೆಯ ಯುನೆಸ್ಕೋ ಸಂಘಟನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಇವನ ಕೊಡುಗೆಯನ್ನು ಗುರುತಿಸಿ ನೈಟ್ ಗೌರವ ನೀಡಿ ಗೌರವಿಸಲಾಯಿತು (1958). ಈತ 1975ರಲ್ಲಿ ನಿಧನನಾದ.	
(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ